ನರೋತ್ತಮದಾಸ
	1528-1611. ಬಂಗಾಳೀ ವೈಷ್ಣವ ಸಂತ ಕವಿ. ತಂದೆ ಕಾಯಸ್ತ ಮನೆತನದ ಗೋಪಾಲಪುರ ರಾಜ್ಯದ ರಾಜ ರಾಜಾ ಕೃಷ್ಣಾನಂದದತ್ತ. ಬಾಲ್ಯದಿಂದಲೂ ವಿರಕ್ತ ಮನೋಭಾವದವನಾದ ಈತ 12ನೆಯ ವಯಸ್ಸಿನಲ್ಲಿ ಸ್ವಪ್ನದಲ್ಲಿ ನಿತ್ಯಾನಂದ ಎಂಬ ಸಂತನನ್ನು ಕಂಡು ಅಂದಿನಿಂದ ಭಕ್ತಿಮಾರ್ಗ ಹಿಡಿದ. ತಂದೆಯ ಮರಣಾನಂತರ ರಾಜ್ಯದ ವಾರಸುದಾರನಾಗಬೇಕಾಗಿದ್ದ ಈತ ತನ್ನ ಮಲತಾಯಿಯ ಮಗ ಸಂತೋಷದತ್ತನಿಗೆ ರಾಜ್ಯಾಧಿಕಾರವನ್ನು ವಹಿಸಿಕೊಟ್ಟು ವೃಂದಾವನಕ್ಕೆ ಪ್ರಯಾಣ ಬೆಳೆಸಿದ. ಅಲ್ಲಿ ಚೈತನ್ಯ ಸಂಪ್ರದಾಯದ ಶ್ರೀ ಜೀವಗೋಸ್ವಾಮಿಯವರಲ್ಲಿ ವ್ಯಾಸಂಗ ಮಾಡಿದ. ಅನಂತರ ಲೋಕನಾಥ ಗೋಸ್ವಾಮಿಯವರಿಂದ ಚೈತನ್ಯಸಂಪ್ರದಾಯದ ದೀಕ್ಷೆಪಡೆದ. ತರುವಾಯ ತನ್ನ ಊರ ಬಳಿ ಬಂದು `ಭಜನಟೋಲಿ ಎಂಬ ಒಂದು ಆಶ್ರಮ ಸ್ಥಾಪಿಸಿದ. ಅಲ್ಲಿ ಚೈತನ್ಯ ಪ್ರಭುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಹೋತ್ಸವಗಳನ್ನು ನಡೆಸುತ್ತ ಒಂದು ಹೊಸ ಬಗೆಯ ಕೀರ್ತನ ಪದ್ಧತಿಯನ್ನು ಪ್ರಚಾರಕ್ಕೆ ತಂದ. ಕವಿಯಲ್ಲದೆ ಸಂಗೀತಜ್ಞ ಕೂಡ ಆಗಿದ್ದ ಈತ ಪ್ರಾರ್ಥನಾ ಮತ್ತು ಪ್ರೇಮಭಕ್ತಿಚಂದ್ರಿಕಾ ಮುಂತಾದ ಗ್ರಂಥಗಳನ್ನು ಬರೆದಿದ್ದಾನೆ. ಈತ ಮತ್ತು ಈತನ ಶಿಷ್ಯರು ಉತ್ತರ ಬಂಗಾಳದಲ್ಲಿ ಗೌಡೀಯ ವೈಷ್ಣವಮತದ ಪ್ರಚಾರ ಮಾಡಿದರು.
	ವೃಂದಾವನದಲ್ಲಿ ಈತನ ಸಮಾಧಿ ಇದೆ.			
		(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ